ಶಿವರಾಮ ಹೆಗಡೆ, ಕೆರೆಮನೆ
	1907-92. ಮೊದಲಶ್ರೇಣಿಯ ಯಕ್ಷಗಾನ ಕಲಾವಿದರು. ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಮನೆಯಲ್ಲಿ 1907 ಜೂನ್ 21ರಂದು ಜನಿಸಿದರು. ತಂದೆ ಶಂಭು ಹೆಗಡೆ, ತಾಯಿ ಸುಬ್ಬಮ್ಮ. ಸುಬ್ಬಮ್ಮನವರಿಗೆ ಕಾರ್ತಿಕೇಯ ಕಾಳಗ, ಸೈಂಧವ ಕಾಳಗ ಕಂಠಪಾಠವಾಗಿತ್ತು. ತಂದೆ ಜನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಸೋದರಮಾವ ಗಜನೀಮಠ ಗಣಪತಿ ಭಟ್ಟರು ಉತ್ತಮ ಮೃದಂಗವಾದಕರು. ದೊಡ್ಡಪ್ಪ ಮಹಾಬಲೇಶ್ವರ ಹೆಗಡೆ ಯಕ್ಷಗಾನ ಭಾಗವತರು ಮತ್ತು ಮದ್ದಳೆ ವಾದಕರು. ಹೀಗೆ ಮೂರು ತಲೆಮಾರಿನ ಯಕ್ಷಗಾನದ ಪರಂಪರೆಯ ಹಿನ್ನೆಲೆಯುಳ್ಳ ಇವರನ್ನು ಕೆ.ಸದಾನಂದ ಹೆಗಡೆಯವರು ಬೆನ್ನುತಟ್ಟಿ ಹುರುಪು ನೀಡಿ ಕಾಲಿಗೆ ಗೆಜ್ಜೆಕಟ್ಟಿ ಕೃಷ್ಣನ ಪಾತ್ರ ಹಾಕಿಸಿ ರಂಗಪ್ರವೇಶ ಮಾಡಿಸಿದರು. ಆಗ ಇವರಿಗೆ ಕೇವಲ ಹದಿನಾರು ವರ್ಷ. ಯಕ್ಷಗಾನ ನಟಸಾರ್ವಭೌಮ ಎನಿಸಿದ ಮೂಡ್ಕಣಿ ನಾರಾ ಯಣ ಹೆಗಡೆಯವರು ಇವ ರಿಂದ ನಾಯಕ, ಪ್ರತಿ ನಾಯಕ ಪಾತ್ರ ಹಾಕಿಸಿ ಧೈರ್ಯ ತುಂಬಿದರು. ಮಾಲೆಕೊಡ್ಲು ಬಾಬೂಭಟ್ಟ ಭಾಗವತರು ಸಾಂಪ್ರದಾಯಿಕ ನೃತ್ಯ ತರ ಬೇತಿ ನೀಡಿದರು. 20 ನೆಯ ವಯಸ್ಸಿಗೆ ಇವರು ಒಬ್ಬ ಸಮರ್ಥ ಯಕ್ಷಗಾನ ಪಟುವಾದರು.

	ಆದರೂ ಪೂರ್ತಿಯಾಗಿ ಈ ರಂಗಕ್ಕೆ ದುಮುಕಲಾಗದೆ, ಅವಕಾಶ ಸಿಕ್ಕಾಗ ಉಪಯೋಗಿಸಿಕೊಂಡು ಜೀವನ ನಿರ್ವಹಣೆಗಾಗಿ ನಾನಾ ದಂಧೆಗಳನ್ನು ಅವಲಂಬಿಸಿದರು. ಕಂಪನಿ ಬಸ್ಸಿನಲ್ಲಿ ಚಾಲಕ, ನಿರ್ವಾಹಕ, ಟಿಕೆಟ್‍ಕೊಡುವ ಏಜೆಂಟ್, ಅದೂ ಕೈಗೆ ಹತ್ತದಾಗ ಸ್ವಂತ ಟ್ಯಾಕ್ಸಿ ಇಟ್ಟುಕೊಂಡು ಕೈಸುಟ್ಟು ಕೊಂಡದ್ದೂ ಆಯಿತು. ವಿಮಾ ಕಂಪನಿಯಲ್ಲಿ ಗುಮಾಸ್ತ, ಇಡಗುಂಜಿ ದೇವಸ್ಥಾನದಲ್ಲಿ ಪಡಚಾಕರಿ, ರೇಷನ್ ಅಂಗಡಿಯಲ್ಲಿ ಗುಮಾಸ್ತಗಿರಿ ಮಾಡಿದರು. ಆದರೆ ಯಾವುದೂ ದಡ ಹತ್ತಲಿಲ್ಲ. ಈ ಸೋಲು ಅವರ ಬದುಕಿನಲ್ಲಿ ಸವಾಲಾಗಿ ನಿಂತಿತು. 

	ಮುಂದೆ ಅವರಿವರ ಮೇಳದಲ್ಲಿ ವೇಷ ಮಾಡುತ್ತ ತಮ್ಮ 27ನೆಯ ವಯಸ್ಸಿನಲ್ಲಿ 1934ರಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಪ್ರಾಸಾದಿಕ ಯಕ್ಷಗಾನ ಮಂಡಳಿ ಕೆರೆಮನೆ ಮೇಳವನ್ನು ಸ್ಥಾಪಿಸಿದರು. ಇಂದು ಯಕ್ಷಗಾನ ಪ್ರಪಂಚದಲ್ಲಿ ಹತ್ತಾರು ನೂತನ ದಾಖಲೆಗಳನ್ನು ಸ್ಥಾಪಿಸಿ ನೂರಾರು ಕಲಾವಿದರಿಗೆ ತರಬೇತಿ ನೀಡಿ, ಸಾವಿರಾರು ಸ್ಥಳಗಳಲ್ಲಿ ಪ್ರದರ್ಶನ ನೀಡಿ ಲಕ್ಷೋಪಲಕ್ಷ ರಸಿಕರ ಹೃನ್ಮನಗಳನ್ನು ಮುದಗೊಳಿಸಿ ತನ್ನ 50 ವರ್ಷದ ಕಲಾಸೇವೆಯನ್ನು ಈ ಮೇಳ ಸಾರ್ಥಕಪಡಿಸಿಕೊಂಡಿದೆ. ಶಿವರಾಮ ಹೆಗಡೆಯವರು 25 ವರ್ಷಗಳ ಕಾಲ ಈ ಮೇಳದ ಸಂಚಾಲಕ ರಾಗಿ, ಪ್ರಧಾನ ನಟರಾಗಿ ಬಹುಮುಖ್ಯ ಹೊಣೆ ಹೊತ್ತು ಮೇಳ ನಡೆಸಿದ್ದು ಒಂದು ಪವಾಡವೇ ಆಗಿದೆ.

	ಇವರಷ್ಟು ರಂಗದಲ್ಲಿ ಮನತಣಿಸಿದ, ಪ್ರಸಂಗಗಳನ್ನು ವಿಭಿನ್ನ ರಸಭಾವಗಳಿಂದೊಡಗೂಡಿದ ಪಾತ್ರಗಳನ್ನು ಈ ಕ್ಷೇತ್ರಕ್ಕೆ ನೀಡಿದ ಯಕ್ಷಗಾನ ಪಟುಗಳು ಅತಿ ವಿರಳ. ಸುಮಾರು ನೂರಕ್ಕೂ ಹೆಚ್ಚು ಆಖ್ಯಾನಗಳಲ್ಲಿ ನೂರೆಂಬತ್ತಕ್ಕೂ ಹೆಚ್ಚು ಪಾತ್ರಗಳನ್ನು ವಹಿಸಿ ರಸಿಕರನ್ನು ತಣಿಸಿದ್ದಾರೆ. ಇವರ ಕಲಾಕೌಶಲ್ಯಕ್ಕೆ ಜ್ವಲಂತಸಾಕ್ಷಿಯಾದ ಪಾತ್ರಗಳೆಂದರೆ ಗದಾಪರ್ವದ ಕೌರವ, ಸಂಧಾನದ ಕೌರವ, ರಾಜಸೂಯಯಾಗದ ಮಾಗಧ, ಸೈರಂಧ್ರೀಕಾಮುಕ ಕೀಚಕ, ಭಕ್ತ ಸುಧನ್ವ, ಲವಕುಶರ ವಾಲ್ಮೀಕಿ, ಪಟ್ಟಾಭಿಷೇಕದ ದಶರಥ, ಭರತ, ರಾಮ, ಕಿರಾತಾರ್ಜುನೀಯ, ಜಯದ್ರಥ ವಧೆ ಮತ್ತು ಸುಭದ್ರಾಕಲ್ಯಾಣದ ಅರ್ಜುನ, ದುಷ್ಟಬುದ್ಧಿ, ಮದನ, ಕಂಸ, ಅಕ್ರೂರ, ಕರ್ಣ, ಹರಿಶ್ಚಂದ್ರ, ಭಸ್ಮಾಸುರ, ಇಂದ್ರಜಿತು, ದಕ್ಷ, ಚಿತ್ರಸೇನ, ಹಿರಣ್ಯಕಶಿಪು, ನಳ, ಭದ್ರಸೇನ, ಕಾರ್ತವೀರ್ಯ, ಈಶ್ವರ, ಪರಶುರಾಮ, ಭೀಷ್ಮ, ರುಕ್ಮಾಂಗದ, ಕೈಲಾಸಶಾಸ್ತ್ರಿ- ಮುಂತಾದವು ಅಚ್ಚಳಿಯದೇ ನಿಲ್ಲತಕ್ಕವು.

	ಇವರು ಕಲಾಕ್ಷೇತ್ರದಲ್ಲಿ ಉತ್ಕøಷ್ಟ ಸಿದ್ಧಿಯ ಪರಾಕಾಷ್ಠೆಯನ್ನು ತಲಪುವುದರೊಂದಿಗೆ ಕನ್ನಡ ಕಲಾರಂಗದ ಉತ್ತುಂಗ ಸಾಧನೆಗಳ ಮಧ್ಯೆ ಯಕ್ಷಗಾನವನ್ನೂ ನಿಲ್ಲಿಸಿ ಇತಿಹಾಸದಲ್ಲಿ ಹಲವು ದಾಖಲೆಗಳಿಗೆ ಕಾರಣರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಟೆಂಟಿನ ಆಟ ಆರಂಭಿಸಿದ ಮೊದಲಿಗರಿವರು. ತಾಂತ್ರಿಕ ದೋಷಗಳಿಂದ ಸಫಲತೆಯನ್ನು ಕಂಡಿಲ್ಲವಾದರೂ 1949ರಲ್ಲೇ ಭೀಷ್ಮ ವಿಜಯವನ್ನು ಚಲನಚಿತ್ರಕ್ಕೆ ಅಳವಡಿಸಿಕೊಟ್ಟವರು. 1950ರಲ್ಲಿ ಧಾರವಾಡ ಆಕಾಶವಾಣಿ ಕೇಂದ್ರ ಸ್ಥಾಪನೆಯಾದಾಗ ಮೊದಲು ಯಕ್ಷಗಾನ ಬಯಲಾಟ ರೂಪಕವನ್ನು ಪ್ರಸಾರಗೊಳಿಸಿದವರು. 1968ರಲ್ಲಿ ಜರಾಸಂಧ ವಧೆಯ ಪೂರ್ಣಭಾಗ ದೆಹಲಿ ದೂರದರ್ಶನ ಕೇಂದ್ರದಿಂದ ಪ್ರಸಾರವಾಯಿತು.

	ಇವರ ಈ ಎಲ್ಲ ಸಿದ್ಧಿಸಾಧನೆಗಳಿಂದಾಗಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಇವರಿಗೆ ರಾಜ್ಯ ಪ್ರಶಸ್ತಿಯನ್ನು ಇತ್ತು ಗೌರವಿಸಿದೆ (1965). ಕೇಂದ್ರ ಸಂಗೀತನಾಟಕ ಅಕಾಡೆಮಿ ಪ್ರಶಸ್ತಿಗೂ (1971) ಇವರು ಪಾತ್ರರಾಗಿದ್ದಾರೆ.	      

 	(ಆರ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ